#ಬರಬಳ್ಳಿ. ಭಾಗ-೩ ( ಕಬ್ಬಿಣದ ಕುರ್ಲಿ)

 

IMG_20160604_120851.jpg
ಸುಮಾರು ಇಪ್ಪತ್ತೈದು-ಇಪ್ಪತ್ತೆಂಟು ವರ್ಷಗಳ ಮೊದಲಿನ ಕಥೆ ಇದು. ನಾನೇನನ್ನೂ ಅತಿಶಯೋಕ್ತಿ ಮಾಡಿಲ್ಲ. ನಿಜವಾಗಿ ನಡೆದ ಘಟನೆಗಳೇ. ಅಲ್ಲಿಯ, ಅಂದರೆ ಕೊಡಸಳ್ಳಿ, ಕಳಚೆ, ಬರಬಳ್ಳಿ ಭಾಗದ, ಜನರಲ್ಲಿ ಮುಕ್ಕಾಲು ಪಾಲು ಜನ ಬಹಳ ಅಪರೂಪಕ್ಕೊಮ್ಮೆ ಪೇಟೆಯ ದರ್ಶನ ಮಾಡುವವರಾಗಿದ್ದರು ಅಂತ ಹೇಳಿದ್ದೆ. ಬಹಳ ಜನ ಮುಗ್ದರೂ ಇದ್ದರು. ಹೊರಜಗತ್ತಿನ ಸಂಪರ್ಕವೇ ಇಲ್ಲದೆ ಇದ್ದವರೂ ಇದ್ದರು. ಈಗಿನಂತೆ ಟೀವಿ, ಮೊಬೈಲ್, ಇಂಟರ್ನೆಟ್ ಯಾವುದೂ ಇಲ್ಲದ ಕಾಲ ಹಾಗೂ ಹತ್ತಿರದ ಪಟ್ಟಣ ಯಲ್ಲಾಪುರದಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿ ದಟ್ಟ ಕಾಡುಗಳ ನಡುವೆ ಇದ್ದ ಪ್ರದೇಶ ಅದು.

ಅಲ್ಲಿ ಒಮ್ಮಿಂದೊಮ್ಮೆ ಗಾಳಿಸುದ್ದಿಗಳು ಹರಡಲಾರಂಭಿಸಿದವು. ಕಾಳಿನದಿಗೆ ಆಣೆಕಟ್ಟು ಕಟ್ಟಿ, ಈ ಎಲ್ಲ ಭಾಗಗಳನ್ನು ಮುಳುಗಿಸುತ್ತಾರೆ ಅಂತ. ಗಾಳಿಸುದ್ದಿ ನಿಧಾನವಾಗಿ ವಾಸ್ತವವಾಗಿ ಬದಲಾಗತೊಡಗಿತ್ತು. ದೂರದ ಕಾರವಾರದಿಂದ ಪೇಟೆಯ ಜನ ಬರಲಾರಂಭಿಸಿದರು. ಮೊದಮೊದಲು ಅಲ್ಲಿಯ ಜನ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ಯಾರೋ ಕಾಡು
ಸುತ್ತಲು ಬಂದಿದ್ದಾರೆಂದುಕೊಂಡರು. ಆದರೆ ನಿಧಾನವಾಗಿ ಯಂತ್ರಗಳು, ವಿದವಿದದ ಯಂತ್ರಗಳು ಬರಲಾರಂಭಿಸಿದವು. ಆಗ ನೋಡಿ….. ಜನರ ಕುತೂಹಲ ಕೆರಳತೊಡಗಿತು. ಆದರೆ ಡ್ಯಾಂ ಸೈಟಿಗೆ ಯಾರಿಗೂ ಪ್ರವೇಶವಿಲ್ಲದಿದ್ದರಿಂದ , ಎಲ್ಲರೂ ದೂರದಿಂದ, ಅಂದರೆ ಕಿಲೋಮೀಟರ್ ಗಳ ದೂರದಿಂದಲೇ ಡ್ಯಾಂ ಸೈಟ್ ನೋಡಿಕೊಂಡು ಬರಲಾರಂಭಿಸಿದರು.

ಆಗೊಂದು ದಿನ ಬಂತು ಬ್ರೇಕಿಂಗ್ ನ್ಯೂಸ್. ಕೊಡಸಳ್ಳಿಗೆ ಕಬ್ಬಿಣದ ಕುರ್ಲಿಗಳು ಬಂದಿವೆ ಅಂತ…….ಬ್ರೇಕಿಂಗ್ ನ್ಯೂಸ್ ಅಂದರೆ ಸಾಧಾರಣದ್ದಲ್ಲ. ಜನರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್…..!!

ಅಲ್ಲಿಯವರೆಗೂ ಜನರು ಈ ಡ್ಯಾಂ ಕಟ್ಟುವ ಸುದ್ದಿಯನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಹ್ಹ್ಮ…ಅದೆಲ್ಲ ಆಗೋ ಮಾತಲ್ಲ ಬಿಡು ಅಂತ ಇದ್ದರು. ಆದರೆ ಈಗ…..ಕಬ್ಬಿಣದ ಕುರ್ಲಿಗಳು ಬಂದು ಕೆಲಸ ಮಾಡೋದಂದ್ರೆ ಏನ್ ತಮಾಶೇನಾ,.. ಅಂತ ಬಹಳ ಜನ ಮತ್ತೆ ಕೊಡಸಳ್ಳಿಗೆ ಹೋಗಿ ಕುರ್ಲಿಗಳನ್ನ ನೋಡಿ ಬಂದರು. ಯಥಾಪ್ರಕಾರ ಕಿಲೋಮೀಟರ್ ದೂರದಿಂದ..

( ನಾವೊಂದಿಷ್ಟು ಹುಡುಗರು ಉದ್ದಬ್ಬಿಗೆ ಹೋಗಿ, ಅಲ್ಲಿಂದ ಕೋಟೆಕಲ್ಲಿಗೆ ಹೋಗಿ, ಅಲ್ಲಿಂದ ಸುಮಾರು ಏಳೆಂಟು ಕಿಲೋಮೀಟರ್ ದೂರದಲ್ಲಿ ಕಾಣುವ ಕೊಡಸಳ್ಳಿ ಡ್ಯಾಂ ಸೈಟನ್ನು ನೋಡಿ, ನಂತರ ಕೆಳಗಿಳಿದು ಊರಿಗೆ ಬಂದ ಮೇಲೆ ಉಳಿದ ಹುಡುಗರಿಗೆ ರೋಚಕವಾಗಿ ಕಬ್ಬಿಣದ ಕುರ್ಲಿ ನೋಡಿದ್ದೇವೆ ಅಂತ ವರ್ಣಿಸಿದ್ದೂ ಉಂಟು. ಏಳೆಂಟು ಕಿಲೋಮೀಟರ್ ದೂರದಿಂದ ಏನು ತಾನೆ ಕಂಡೀತು…..!! )
( ನೀವೆಲ್ಲ ಯಾಣದ ಬಗ್ಗೆ ಕೇಳಿದ್ದೀರಿ, ಕೆಲವರು ನೋಡಿಯೂ ಇರಬಹುದು, ಆ ಯಾಣದ ಕೊನೇಯ ತಮ್ಮನೇ ಈ ಕೋಟೇಕಲ್ಲು. ಆ ಭಾಗದ ಕಾಡಿನಲ್ಲಿ, ಎತ್ತರದ ಬೆಟ್ಟದ ಮೇಲಿದೆ. ಇನ್ನೂ ಇದೆ. )

ಬಂದವರು ಇನ್ನೂ ಹತ್ತಾರು ಜನರಿಗೆ ರೋಚಕವಾಗಿ ಸುದ್ದಿ ಹೇಳಿದರು. ಅವು ಮಣ್ಣು ಬಗೆಯುವ, ಮಣ್ಣನ್ನು ಎತ್ತುವ, ಮಣ್ಣನ್ನು ಲಾರಿಗಳಿಗೆ ತುಂಬುವ ವಿಧಗಳನ್ನು ಎಷ್ಟು ವರ್ಣಿಸಿದರೂ, ಬಡಪೆಟ್ಟಿಗೆ ನಂಬದ ಹಲವರು, ತಾವೇ ಡ್ಯಾಂ ಸೈಟಿನ ಹತ್ತಿರ ( ಹತ್ತಿರ ಎಂದರೆ ಸುಮಾರು ಎರಡು ಕಿಲೋಮೀಟರ್ ದೂರ…..!! ) ಹೋಗಿ ನೋಡಿ, ಮೂಗಿನ ಮೇಲೆ ಬೆರಳಿಟ್ಟುಕೊಂಡರು.

ಕುರ್ಲಿ ಎಂದರೆ ಏಡಿಗಳು. ಏಡಿಗಳನ್ನು ನೋಡಿದ್ದೀರಲ್ಲಾ ನೀವೆಲ್ಲ. ಕಾಲುಗಳ ಮೇಲೆ ಓಡಾಡುತ್ತಲೇ ಮುಂದಿನ ಎರಡು ಕೈಗಳಂತಹ ರಚನೆಯಿಂದ ಕೀಟಾದಿಗಳನ್ನು ಬೇಟೆಯಾಡುತ್ತವೆ, ವಸ್ತುಗಳನ್ನೂ ಎತ್ತಿಹಿಡಿಯುತ್ತವೆ. ಸಾಗಿಸುತ್ತವೆ ಕೂಡಾ. ಅಂತಹ ಏಡಿಗಳನ್ನು ಮಾತ್ರ ನೋಡಿ ಗೊತ್ತಿದ್ದ ಜನರಿಗೆ, ಈ ಕಬ್ಬಿಣದ ಏಡಿಗಳು , ಪ್ರಪಂಚದ ಎಂಟನೇ ಅದ್ಭುತದಂತೆ ಕಂಡಿದ್ದರಲ್ಲಿ ಆಶ್ಚರ್ಯವೇನಿದೆ. ಇಂದಿನ ಮಕ್ಕಳಿಗೆ ತಂದೆತಾಯಂದಿರು, ಹುಟ್ಟುತ್ತಲೇ JCB, Hitachi, ಮುಂತಾದ ಆಟಿಕೆಗಳನ್ನು ತಂದುಕೊಟ್ಟು, ಮಕ್ಕಳ ಕುತೂಹಲ, ರೋಮಾಂಚನ, ಸಂತಸಗಳನ್ನು ಕಡಿಮೆ ಮಾಡಿಬಿಟ್ಟಿದ್ದಾರೆ. ಇರ್ಲಿ….
ಅಂದಿನ , ಅಲ್ಲಿಯ ಜನರಿಗೆ ಡ್ಯಾಂ ಸೈಟಿಗೆ ಬಂದ ಜೇಸಿಬಿಯನ್ನು ದೂರದಿಂದಲೇ ನೋಡಿ, ಅಬ್ಬಾ, ಎಷ್ಟು ದೊಡ್ಡ ಕಬ್ಬಿಣದ ಕುರ್ಲಿ ಎಂದು ಆಶ್ಚರ್ಯಚಕಿತರಾಗುವ ಅವಕಾಶ.

ಇಂತಿಪ್ಪ ಜನರಿಗೆ ಕಬ್ಬಿಣದ ಕುರ್ಲಿಯೂ ಬಂದು ಕೆಲಸ ಮಾಡತೊಡಗಿದರೆ ಈ ಡ್ಯಾಂ ಆಗುವುದು ಖಂಡಿತ ಅನ್ನಿಸಿತು. ನಂತರ ಆಣೆಕಟ್ಟಿನ ಕೆಲಸ ನಿಲ್ಲಿಸಬೇಕು ಎಂದು ದೊಡ್ಡ ಚಳುವಳಿಯೇ ಶುರುವಾಯ್ತು….ಅದರಲ್ಲಿ ಒಬ್ಬರ ಬಲಿದಾನವೂ ನಡೆಯಿತು ಎಂಬುದೆಲ್ಲಾ ಈಗ ಇತಿಹಾಸ. ಅದನ್ನು ಬರೆಯಹೊರಟರೆ, ಈ ಫೇಸ್ಬುಕ್ ಗೋಡೆಗಳು ಸಾಕಾಗಲಾರವು. ಮೊತ್ತೊಮ್ಮೆ ಬರೆಯುತ್ತೇನೆ.

ಈ ಕೊಡಸಳ್ಳಿ ಡ್ಯಾಂ ನೋಡಲು ನಾನೂ ಒಂದುದಿನ ನನ್ನ ಬಾವಂದಿರ ಜೊತೆ ಸೈಕಲ್ಲಿನಲ್ಲಿ ಹೊರಟೆ. ಒಂದು ಸೈಕಲ್ ನಮ್ಮ ಬಳಿ ಇತ್ತು. ಇನ್ನೊಂದು ಸಣ್ಣ ಸೈಕಲ್ ಮತ್ಯಾರಿಂದಲೋ ಕೇಳಿ ಪಡೆದು, ನಾವು ಮೂರು ಜನ ಹೊರಟೆವು……..

( To be Continued………………

—————————————————————

#ಬರಬಳ್ಳಿ. ಭಾಗ-೪   ( ಕೊಡಸಳ್ಳಿ ಡ್ಯಾಂ )
*-*-*-*-*-*-*-*-*-*-*-*-*-*-*-*-*-*-*-*-*
ಎಲ್ಲರೂ ವಿದವಿದವಾಗಿ ವರ್ಣಿಸುವ ಆ ಕೊಡಸಳ್ಳಿ ಡ್ಯಾಂ ಸೈಟ್ ನೋಡಲು ನಾನೂ ಒಂದುದಿನ ನನ್ನ ಬಾವಂದಿರ ಜೊತೆ ಹೊರಡುವುದೆಂದು ತೀರ್ಮಾನಿಸಿದೆ. ಇದು ಡ್ಯಾಂ ನ ಕೆಲಸ ಪ್ರಾರಂಭವಾದ ಮೂರೋನಾಲ್ಕೋ ವರ್ಷದ ನಂತರದ ಘಟನೆ. ಆ ವರ್ಷ ನನ್ನ ಭಾವಂದಿರಾದ Yogesh ಮತ್ತು Shashidhara ಇಬ್ಬರೂ ಊರಲ್ಲೇ ಇದ್ದರು. ಅವರಿಬ್ಬರೂ ಹೋಗಿ ದೂರದಿಂದ ಡ್ಯಾಂ ಕೆಲಸ ನೋಡಿ ಬಂದವರಾಗಿದ್ದರು. ಅವರು ಹೇಳಿದ ವರ್ಣನೆಯಿಂದ ನನಗೂ ಹೋಗಲೇಬೇಕೆನಿಸಿತು. ನೋಡಿದವರಿದ್ದಾಗ ನನ್ನ ಕೆಲಸ ಸುಲಭವೇ ಆಯಿತಲ್ಲಾ ಅಂತ ಯೋಚಿಸಿ ಒಂದು ಮುಂಜಾನೆ ಹೋಗಲು ತೀರ್ಮಾನಿಸಿದೆವು. ಆಗ ನನಗೆ ಹತ್ತೋ ಹನ್ನೆರಡೋ ವರ್ಷ ವಯಸ್ಸು.
ಹೋಗುವುದಾದರೆ ಹೇಗೆ..? ನಡೆದು ಹೋಗಲು ಸಾಧ್ಯವಿಲ್ಲ. ಸುಮಾರು ಹತ್ತು ಕಿಲೋಮೀಟರ್ ಹೋಗಬೇಕು..

ಸರಿ. ಒಂದು ಯೋಚನೆ ಬಂತು. ಹೇಗೂ ಒಂದು ಸೈಕಲ್ ನಮ್ಮ ಬಳಿ ಇತ್ತು. ಇನ್ನೊಂದು ಸಣ್ಣ ಸೈಕಲ್ ಮತ್ಯಾರಿಂದಲೋ ಕೇಳಿ ಪಡೆದು, ನಾವು ಮೂರು ಜನ ಹೊರಟೆವು. ದೊಡ್ಡ ಸೈಕಲ್ ಯೋಗೀಶ ಓಡಿಸುವುದು, ನಾನು ಅದರಲ್ಲಿ ಕೂರುವುದು ಹಾಗೂ ಸಣ್ಣ ಸೈಕಲ್ ಶಶಿಧರ ಓಡಿಸಿಕೊಂಡು ಬರುವುದು ಎಂದು ತೀರ್ಮಾನವಾಯ್ತು. ಯೋಗೀಶ ಭಾವ ದೊಡ್ಡವ, ಶಶಿಧರ ಅವನಿಗಿಂತ ಮೂರು ವರ್ಷ ಚಿಕ್ಕವ. ಶಶಿಧರ ನನಗಿಂತ ಮೂರು ವರ್ಷ ದೊಡ್ಡವ ಅಂದ್ರೆ ಆಗ ಅವನಿಗೆ ಹದಿನೈದಿರಬೇಕು. ಈ ಬಾಲ್ಯದ ನೆನಪುಗಳೇ ಹಾಗೆ. ಮುಖ್ಯ ವಿವರಗಳು ಜೀವಮಾನವಿಡೀ ಮೆದುಳಲ್ಲಿ ಅಚ್ಚೊತ್ತಿರುತ್ತವೆ ನೋಡಿ. ಅದೇ ಇಪ್ಪತ್ತರ ನಂತರದ ನೆನಪುಗಳು ಇಷ್ಟು ಗಾಢವಾಗಿ ನೆನಪಿರುವುದಿಲ್ಲ.

ಸರಿ, ಸುಮಾರು ಹತ್ತು ಗಂಟೆಯ ಹೊತ್ತಿಗೆ ನಮ್ಮ ಸವಾರಿ ಕೊಡಸಳ್ಳಿಯ ಕಡೆ ಹೊರಟಿತು. ಆ ಸಂಪೂರ್ಣ ರಸ್ತೆ ಮಣ್ಣಿನ ರಸ್ತೆ. ಮುಂಚೆಯೇ ನಿಮಗೆ ವಿವರಿಸಿದಂತೆ, ನದಿ ಮಣ್ಣಿನ, ಮರಳು ಮಿಶ್ರಿತ ಮಣ್ಣು…ಚಿಕ್ಕ ಚಿಕ್ಕ ಕಲ್ಲುಗಳು ಕೂಡಿರುವ ರಸ್ತೆ. ನಮ್ಮ ಸೈಕಲ್ಲಿನ ಬ್ರೇಕು ಸರಿಇರಲಿಲ್ಲ. ನದಿಯ ಪಕ್ಕವೇ ರಸ್ತೆಯೂ ಹಾದು ಹೋಗಿತ್ತಾದ್ದರಿಂದ, ನದಿ ನೋಡುತ್ತಾ ಹೋಗಿದ್ದೇ ಗೊತ್ತಾಗುತ್ತಿರಲಿಲ್ಲ. ನದಿಯ ಮತ್ತೊಂದು ದಡದಲ್ಲಿನ ಅಪಾರ ಸಸ್ಯರಾಶಿ, ಬೃಹದಾಕಾರದ ಮರಗಳು ಎಲ್ಲ ನೋಡುತ್ತಾ ಕೆಲವೊಮ್ಮೆ ನಾಮುಂದು ತಾಮುಂದು ಅಂತ ವೇಗದಲ್ಲಿ ಹೋಗುತ್ತಿದ್ದೆವು.

ಇಲ್ಲಿ ಬೃಹದಾಕಾರದ ಮರಗಳು ಎಂದೆ…ಎಷ್ಟು ದೊಡ್ಡ ಮರಗಳಿತ್ತು ಅಂತ ನಿಮಗೆ ಊಹೆ ಕೂಡಾ ಮಾಡಲಸಾಧ್ಯ. ಮುಳುಗಡೆಗೆ ಮೊದಲು ದೊಡ್ಡ ಮರಗಳನ್ನೆಲ್ಲ ಕಡಿದು ಸಾಗಿಸಲು ಕೇ.ಪೀ.ಸಿ ಯವರು, ಸರ್ಕಾರದವರು ಟಿಂಬರ್ ಕಂಪನಿಗೆ ಅನುಮತಿ ನೀಡಿದ್ದರು. ಆಗ ಕೆಲವು ಮರಗಳನ್ನು ಕಡಿಯಲಾಗದೇ, ಕಡಿದ ಕೆಲವನ್ನು ಸಾಗಿಸಲಾಗದೇ ಬಿಟ್ಟು ಹೋಗಿದ್ದೂ ಇತ್ತು. ದೊಡ್ಡ ಹದಿನಾರು ಚಕ್ರದ ಲಾರಿಯ ಹಿಂಬಾಗದ ಟಿಪ್ಪರ್ ಗಿಂತ ದೊಡ್ಡ ಗಾತ್ರದ ಮರಗಳಿದ್ದವು. ಹದಿನೈದಿಪ್ಪತ್ತು ಜನ ಕೈಕೈ ಹಿಡಿದು ನಿಂತರೆ ಮಾತ್ರ ತಬ್ಬಿಕೊಳ್ಳಲು ಸಾಧ್ಯ ಎಂಬಷ್ಟು ದೊಡ್ಡ ಮರಗಳಿದ್ದವು. ಬಿಡಿ….ಆ ಸಸ್ಯವೈಭವ ಇನ್ನು ನನ್ನ ಜನ್ಮದಲ್ಲಿ ನೋಡಲು ಸಾಧ್ಯವಿಲ್ಲವೇನೋ……………..

ಎಲ್ಲಿದ್ದೆ…?? ಸೈಕಲ್ ನಲ್ಲಿ ಹೋಗುತ್ತಿದ್ದೆ.
ನನ್ನನ್ನು ಮುಂದಿನ ಬಂಪರ್ ಮೇಲೆ ಕುಳ್ಳಿರಿಸಿಕೊಂಡು ಯೋಗೀಶ ಸೈಕಲ್ ತುಳಿಯುತ್ತಿದ್ದ. ಸಮತಟ್ಟಾದ ರಸ್ತೆಯಲ್ಲಿ ನಮ್ಮೆರಡು ಸೈಕಲ್ ಗಳ ಮಧ್ಯೆ ವೇಗದ ಸ್ಪರ್ಧೆ ಏರ್ಪಡುತ್ತಿತ್ತು. ಹಾಗೇ ಬರುತ್ತಾ ಕೊಡಸಳ್ಳಿ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವಾಗ ಒಂದು ಇಳಿಜಾರು ಬಂತು. ಮೊದಲೇ ಬ್ರೇಕ್ ಕಡಿಮೆ ಇರುವ ಸೈಕಲ್ ನಲ್ಲಿ ವೇಗದ ಸ್ಪರ್ಧೆಯಲ್ಲಿ ತೊಡಗಿದ್ದ ನಾವು ಇಳಿಜಾರನ್ನು ಲೆಕ್ಕಿಸಲಿಲ್ಲ. ಅದೇ ಎಡವಟ್ಟಾಯ್ತು. ಇಳಿಜಾರಿನಲ್ಲಿ ವೇಗದಲ್ಲಿದ್ದವರು ಮೇಲೇರುವಾಗ ರಸ್ತೆಯಲ್ಲಿ ಬಿದ್ದಿದ್ದ ಮುಷ್ಟಿಗಾತ್ರದ ಕಲ್ಲನ್ನು ಗಮನಿಸಲೇ ಇಲ್ಲ. ಮುಂದಿನ ಚಕ್ರ ಕಲ್ಲಿನ ಮೇಲೆ ಹತ್ತಿದಾಕ್ಷಣ ನಮಗೆ ಸಮತೋಲನ ತಪ್ಪಿ ದಡಾರನೆ ರಸ್ತೆಗೆ ಬಿದ್ದೆವು. ಮುಂದಿನ ಬಂಪರ್ ಮೇಲೆ ಕುಳಿತಿದ್ದ ನಾನು ತಪ್ಪಿಸಿಕೊಳ್ಳಲು ಸಾಧ್ಯವೇ ಆಗದೆ ನೆಲಕಚ್ಚಿದ್ದೆ. ಸೈಕಲ್ ತುಳಿಯುತ್ತಿದ್ದವ ಯೋಗೀಶ ತುಂಬಾ ಪೆಟ್ಟಾಗದಂತೆ ಬಚಾವಾಗಿದ್ದ. ನನಗೆ ಮಾತ್ರ ಕಾಲುಗಳು ಸಂಪೂರ್ಣ ತರಚಿ ರಕ್ತ ಬರುತ್ತಿತ್ತು. ಮೈಕೈಗೆಲ್ಲಾ ಪೆಟ್ಟಾಗಿತ್ತು.

ಸರಿಯಾಗಿ ಮುಂದೊಂದು ಹುಣಿಸೇ ಮರವಿತ್ತು. ರಸ್ತೆಯ ಪಕ್ಕದಲ್ಲೇ ಒಂದು ಚಿಕ್ಕ ದೇವರ ಕಟ್ಟೆಯಿತ್ತು. ಬಿದ್ದ ಏಟಿಗೆ ಗಾಬರಿಯಲ್ಲಿ ಕೈಕಾಲೆಲ್ಲ ನಡುಗುತ್ತಿತ್ತಾದರೂ ಒಂದೈದು ನಿಮಿಷ ಸುಧಾರಿಸಿಕೊಂಡೆವು. ಹಿಂದಿನಿಂದ ಬರುತ್ತಿದ್ದ ಶಶಿಧರನೂ ಸೈಕಲ್ ನಿಲ್ಲಿಸಿ ನಮ್ಮನ್ನು ಸಮಾಧಾನ ಪಡಿಸಿದ. ನಂತರ ನಮ್ಮಲ್ಲೇ ನಾವು, ಇಲ್ಲಿ ದೇವರಿದ್ದಿದ್ದರಿಂದ ಬದುಕಿದೆವು, ಇಲ್ಲವಾದಲ್ಲಿ ನಮ್ಮ ಸೈಕಲ್ ಮುಂದಿದ್ದ ಹುಣಿಸೇಮರಕ್ಕೆ ಡಿಕ್ಕಿ ಹೊಡೆದು ಇನ್ನಷ್ಟು ಪೆಟ್ಟಗುತ್ತಿತ್ತು ಅಂತ ಸಮಾಧಾನ ಪಟ್ಟುಕೊಂಡೆವು. ಆದರೆ ಬಾವಂದಿರಿಬ್ಬರಿಗೂ ಹೊಸ ತಲೆಬಿಸಿ ಶುರುವಾಗಿತ್ತು. ಈಗ ಮನೆಗೆ ಹೋಗಿ ಸರಸ್ವತತ್ತೆಗೆ ಏನು ಹೇಳೋದು ಅಂತ. ನನ್ನ ಅಮ್ಮನ ಹೆಸರು ಸರಸ್ವತಿ . ಅವಳಿಗೆ ಸುದ್ದಿ ಗೊತ್ತಾದರೆ ಸರಿಯಾಗಿ ಬೈತಾಳಲ್ಲ ಈಗ ಅಂತ.

ಈ ತಲೆಬಿಸಿಯಲ್ಲಿ ಡ್ಯಾಂ ನೋಡೋದು, ಕಬ್ಬಿಣದ ಕುರ್ಲಿ ನೋಡೋದು ಎಲ್ಲವೂ ತಲೆಯಿಂದ ಹಾರಿ ಹೋಗಿತ್ತು. ಮನೆಗೆ ವಾಪಸಾದರೆ ಸಾಕಾಗಿತ್ತು. ಡ್ಯಾಮಿಗೆ ಅಲ್ಲಿಂದಲೇ ಕೈ ( ಹಹ….ಬರೀ ಕೈ ಅಲ್ಲ..!! ತರಚಿ ರಕ್ತಬರುತ್ತಿರುವ ಕೈಗಳು…! ) ಮುಗಿದು, ಕೆತ್ತಿದ ಕಾಲುಗಳು, ತರಚಿದ ಮೈ ಹೊತ್ತುಕೊಂಡು , ಹಾಳಾದ ಸೈಕಲ್ಲನ್ನ ಸಾಧ್ಯವಾದಷ್ಟು ಸರಿಪಡಿಸಿಕೊಂಡು, ಮಧ್ಯಾಹ್ನದ ಊಟಕ್ಕೆ ಮನೆಗೆ ಬಂದೆವು. ಕಬ್ಬಿಣದ ಕುರ್ಲಿ ಯನ್ನು ಕಣ್ಣಾರೆ ನೋಡುವ, ಡ್ಯಾಂ ನ್ನು ನೋಡುವ ನನ್ನ ಮಹದಾಸೆಗೆ ಹೀಗೊಂದು ಪೂರ್ಣವಿರಾಮ ಬಿತ್ತು ನೋಡಿ. ಆಮೇಲೆಂದೂ ನನಗೆ ಡ್ಯಾಂ ಸೈಟಿಗೆ ಹೋಗುವ ಅವಕಾಶ ಸಿಗಲೇ ಇಲ್ಲ.

ಆದರೆ, ನಂತರ ಬಹಳ ಬಾರಿ ನಾವು , ಬರಬಳ್ಳಿಯಿಂದ ಐದು ಕಿಲೋಮೀಟರ್ ದೂರದಲ್ಲಿದ್ದ, ಸಾತೊಡ್ಡಿ ಜಲಪಾತಕ್ಕೆ ಹೋಗಿದ್ದೆವು. ಅದು ಇನ್ನೊಂದು ಅಧ್ಯಾಯ…!! ಈ ಬಾಲ್ಯವೆಂಬುದೇ ಹಾಗೆ ಎಷ್ಟು ಅಗೆದರೂ ಮುಗಿಯಲಾರದ ಸುವರ್ಣಕ್ಷಣಗಳ ಅಕ್ಷಯಗಣಿ. ಅದನ್ನು ಇನ್ನೊಮ್ಮೆ ಹೇಳುತ್ತೇನೆ.

( ಇನ್ನೂ ಬಹಳಷ್ಟಿದೆ….
ಹಾಗಾಗಿ ಮುಂದುವರಿಯುತ್ತದೆ….!! )

 

 

Advertisements