Uncategorized

ಬರಬಳ್ಳಿ. ಭಾಗ-೨

DSC04855ಒಂದೆರಡು ವಿಷಯಗಳನ್ನು ಮೊದಲೇ ಹೇಳಿರದಿದ್ದರೆ , ನಾನು ಏನು ಹೇಳ್ತೇನೆ ಅನ್ನೊದು ನಿಮಗೆ ಅರ್ಥ ಆಗುವುದಿಲ್ಲ.

ಅಬ್ಬಿ ಅಂದೆ. ಹಾಗೆಂದರೆ,….. ಹೇಳ್ತೀನಿ.  ಮಳೆಗಾಲದಲ್ಲಿ ಕಾಡಿನಲ್ಲಿ ಇಂಗಿದ ಮಳೆನೀರು,  ನಂತರ ವರ್ಷವಿಡೀ ಜಲ ಅಥವಾ ಒರತೆಯ ಮೂಲಕ ಹೊರಬರುತ್ತಿರುವ ಒಂದು ಕೆರೆ, ಆ ಕೆರೆಯಿಂದ ಸಣ್ಣ ಕಾಲುವೆಯ ಮೂಲಕ ಊರಿನ ಎಲ್ಲ ಮನೆಗಳ ತನಕವೂ ಹರಿದು ಬರುವ ನೀರು, ಅವರವರ ಮನೆಯ ಹತ್ತಿರ ಕಾಲುವೆಯಿಂದ ಸಣ್ಣದೊಂದು ನೀರಿನ ಹರಿವು, ಆ ಹರಿವ ನೀರಿಗೆ ಅಡಿಕೆ ಮರದಿಂದ ಮಾಡಿದ ಹರಿಣಿ, ( ಅಂದರೆ ಅಡಿಕೆ ಮರವನ್ನು ಅರ್ಧಕ್ಕೆ ಸೀಳಿ ನೀರು ಹರಿಯುವಂತೆ ಮಾಡಿದ ರಚನೆ . ) ಆ ಹರಿಣಿಯ ಮೂಲಕ ಸಾಗಿ ಬರುವ ನೀರು ಆಯಾ ಮನೆಯ ಬಚ್ಚಲಿಗೆ ಬಂದು ಬೀಳುವ ವ್ಯವಸ್ಥೆ. ವರ್ಷದ ಮುನ್ನೂರ ಅರವತ್ತೈದು ದಿನವೂ, ದಿನದ ಇಪ್ಪತ್ತನಾಲ್ಕು ಗಂಟೆಯೂ ಬೀಳುತ್ತಿರುವ,  ಬಿದ್ದು ತೋಟದೆಡೆಗೆ ಹರಿದು ಹೋಗುವ ನೀರು. ಈ ಬೀಳುವ ನೀರಿಗೆ ಅಬ್ಬಿ ಎಂದು ಹೆಸರು. ಕೆರೆಯಿಂದ ನೀರು ಹರಿದು ಬರುವ ಕಾಲುವೆಗೆ ಬೆಲಗು ಎನ್ನತ್ತಾರೆ. ಎಷ್ಟು ಸ್ವಚ್ಛ ನೀರೆಂದರೆ, ನಾವು ಬೆಲಗಿನ ನೀರನ್ನೇ ನೇರವಾಗಿ ಕುಡಿಯುತ್ತಿದ್ದೆವು.  ಬಿಡಿ.. ಇಂದು ನೀರಿಗಾಗಿ ನಡೆಯುತ್ತಿರುವ ದೊಂಬರಾಟ, ಹೊಡೆದಾಟ, ನಿಂದನೆ, ಇತ್ಯಾದಿಗಳನ್ನು ನೋಡುತ್ತಿದ್ದರೆ ಬೇಸರವಾಗುತ್ತದೆ. ಎಂತಹ ಅದ್ಭುತವಾದ ಊರು ಮುಳುಗಿ ಹೋಯಿತಲ್ಲಾ ಎಂದು ಹೊಟ್ಟೆ ಉರಿಯುತ್ತದೆ. ಈ ಮೂರ್ಖ ನಾಯಕರುಗಳಿಗೇನು ಗೊತ್ತು ಸ್ವರ್ಗ ಹೇಗಿರುತ್ತದೆ ಅಂತ. ನನ್ನ ಮಟ್ಟಿಗಂತೂ ಸ್ವರ್ಗ ಮುಳುಗಿಹೋಗಿದೆ..!!  

ಬಾಳೆಹಣ್ಣಿನ ಮರವನ್ನು ಹತ್ತಿ ಗೊನೆಯಲ್ಲಿ ಹಣ್ಣಾದ ಬಾಳೆಹಣ್ಣನ್ನು ಮಾತ್ರ ಕೊಯ್ದು ತಿನ್ನುತ್ತಿದ್ದೆವು ಅಂದರೆ ಆ ಊರು ಎಷ್ಟು ಸಂತೃಪ್ತವಾಗಿತ್ತು ನೀವೇ ಯೋಚಿಸಿ. ಹಾಗೆಯೇ ಹಲಸಿನ ಮರದ ಸಂಪೂರ್ಣ ಉಪಯೋಗ ಪಡೆಯುವಲ್ಲಿಯೂ ಊರವರು ಬಹಳ ಮುಂದಿದ್ದರು.   ಹಲಸು ಒಂದು ಗ್ಲುಟೇನ್ ಮುಕ್ತ ಆಹಾರ ಅನ್ನೋದು ನಿಮಗೆ ಗೊತ್ತಿರಬಹುದು. ಹಲಸಿನ ಮರಗಳು ಸಾವಿರಾರು ಇದ್ದವು ಅಂತ ಮೊದಲೇ ಹೇಳಿದ್ದೆ. ನಾವು, ಹುಡುಗರು ಅಕ್ಷರಶಃ ಮಂಗಗಳಂತೇ ಹಲಸಿನ ಹಣ್ಣು ತಿನ್ನುತ್ತಿದ್ದೆವು. ಅದರಲ್ಲೂ ಬಿಳುವ ಹಣ್ಣಾಗಿದ್ದರಂತೂ ಹಬ್ಬ. ಮರದ ಮೇಲೆಯೇ ಹಣ್ಣನ್ನು ಬಿರಿದು, ಒಂದೊಂದಾಗಿ ಸೊಳೆಗಳನ್ನು ನುಂಗುತ್ತಾ ಕೂರುತ್ತಿದ್ದೆವು. ನಾನಂತೂ ಆಗ ಇಡೀ ಹಣ್ಣನ್ನು ಒಬ್ಬನೇ ಖಾಲಿ ಮಾಡುತ್ತಿದ್ದೆ. ರುಚಿಯೂ ಹಾಗೇ ಇತ್ತು ಬಿಡಿ ಆ ಹಲಸಿನ ಹಣ್ಣಗಳದ್ದು.  ಆ ರುಚಿಯನ್ನು ಹ್ಯಾಗೆ ವರ್ಣಿಸಲಿ ನಾನು… ಸುಮ್ಮನೇ ಬಾಯಲ್ಲಿ ನೀರೊಡೆಯಲು ಪ್ರಾರಂಭವಾಗುತ್ತದೆ ಅಷ್ಟೇ.  ಹಲಸಿನ ಹುಳಿ ಅಥವಾ ಸಾಂಬಾರ್ ಬಗ್ಗೆ ಹೇಳಿದೆ. ಅದು ಮಧ್ಯಾಹ್ನದ ಊಟಕ್ಕಾಯಿತು. ಬೆಳಗಿನ ತಿಂಡಿ ಏನು ಗೊತ್ತಾ…. ಉಕಡಾಪು…!! ಏನಿದು , ಇವನಿಗೇನಾಗಿದೆ? ? ಎಂದು ಯೋಚಿಸ ಬೇಡಿ. ಅಲ್ಲಿಯ,  ಅಂದಿನ ಭಾಷೆಯ ಸೊಬಗು ಹಾಗೇ ಇತ್ತು. ಆ ಕನ್ನಡ ಭಾಷೆಯಲ್ಲಿ ಬಹಳ ಸಂಸ್ಕೃತ ಮಿಶ್ರಣವಿತ್ತು. ಉದಾಹರಣೆಗೆ : ನೀರಿಗೆ ಉದಕ ಎನ್ನುತ್ತಿದ್ದರು, ಬೆಳಗ್ಗಿಗೆ ಉದಿಯಪ್ಪಾಗ ಎನ್ನುತ್ತಿದ್ದರು. ಹವ್ಯಕ ಕನ್ನಡ ಭಾಷೆಯಲ್ಲಿಯೇ ಅವರದ್ದು ವಿಭಿನ್ನ ಕವಲು. ಇರಲಿ…ಎಲ್ಲಿದ್ದೆ ನಾನು? ? ಉಕಡಾಪು…!  ಹಲಸಿನ ಸೊಳೆಗಳನ್ನು ಸಣ್ಣದಾಗಿ ಹೆಚ್ಚಿ,  ಕಡಿಮೆ ನೀರಿನಲ್ಲಿ ಹದವಾಗಿ ಬೇಯಿಸಿ , ಬೇಯಿಸೋದೇನು ಕರಗಿಸಿ, ಅದಕ್ಕೆ ಕಾಯಿತುರಿ,  ಮಸಾಲೆ ಎಲ್ಲವನ್ನೂ ಮಿಶ್ರಮಾಡಿ,  ಉಪ್ಪಿಟ್ಟಿನಂತೇ ತಯಾರಿಸುವ ತಿಂಡಿಯೇ ಉಕಡಾಪು. ಹಲಸಿನ ಸೊಳೆಯ ಹುಳಿ ಅಥವಾ ಸಾಂಬಾರಿನಂತೆಯೇ ಇದು ಕೂಡಾ ಬಹಳ ರುಚಿ*.    ಸರಿಯಾಗಿ ಗೊತ್ತಿದ್ದವರು ಮಾಡಿದಾಗ ಮಾತ್ರ..!!  ಅಂತೆಯೇ ಹಲಸಿನ ಎಳೆ ಗುಜ್ಜೆಯ ಪಲ್ಯ,  ಸಾಂಬಾರ್ ತುಂಬಾ ರುಚಿಯಾಗುತ್ತದೆ. ನಿಮಗೆಲ್ಲ ಬೇರುಹಲಸು ಅಂದ್ರೆ ಗೊತ್ತಿದೆಯೋ ಇಲ್ವೋ .. ಇದೂ ಒಂದು ಹಲಸಿನ ಪ್ರಜಾತಿಯೇ.  ಸಣ್ಣ ಗಾತ್ರದ ಹಲಸು, ರುಚಿ ಮಾತ್ರ ಅದ್ಭುತ . ಇದರ ಸಾಂಬಾರ್, ಬೋಂಡ, ಪಲ್ಯ ಎಲ್ಲವೂ ಬಹಳ ರುಚಿಯೇ.  ಏನಿದು, ಇವನು ಬರೀ ತಿನ್ನೋದರ ಬಗ್ಗೆ ಮಾತ್ರ ಬರೀತಿದ್ದಾನೆ ಅಂದ್ಕೋಬೇಡಿ. ಇವೆಲ್ಲ ನನ್ನ ಬಾಲ್ಯದ ಸವಿನೆನಪುಗಳು. ಬಾಲ್ಯದಲ್ಲಿ ಇನ್ನೇನಿರುತ್ತೆ ಹೇಳಿ. ತಲೆಬಿಸಿ ಇಲ್ಲದ ಜೀವನ. ಆಟ ಆಡೋದು, ತಿನ್ನೋದು, ಸುತ್ತೋದು ಇದೇ ಆಗಿತ್ತು ಆ ಕಾಲದಲ್ಲಿ.

 ಅಲ್ಲಿಯ ಜನರಲ್ಲಿ ಮುಕ್ಕಾಲು ಪಾಲು ಜನ ಬಹಳ  ಅಪರೂಪಕ್ಕೊಮ್ಮೆ ಪೇಟೆಯ ದರ್ಶನ ಮಾಡುವವರಾಗಿದ್ದರು. ಗಣೇಶಗುಡಿ, ದೇಹಳ್ಳಿ, ಕುಂಬ್ರಿ, ಹೆಬ್ಬಾರ್ ಕುಂಬ್ರಿ, ಸಾತೊಡ್ಡಿ, ವಡ್ಡಿ, ಬರಬಳ್ಳಿ, ಬೀರ್ಕೊಲ್, ಬೊಗರೀಗದ್ದೆ, ಕಳಚೆ …. (ಬಹಳ ಊರಿನ ಹೆಸರುಗಳು ಮರೆತೇಹೋಗಿವೆ) ಮುಂತಾದ ಹತ್ತು ಹಲವು ಊರುಗಳಲ್ಲಿ ಸುತ್ತಿ ಅಂತಿಮವಾಗಿ ಕೊಡಸಳ್ಳಿ ತಲುಪುವ,  ಕೆಂಪು ಕೆ.ಎಸ್.ಆರ್.ಟೀ.ಸಿ ಬಸ್ಸು ಪ್ರತೀದಿನವೂ ಕಿಕ್ಕಿರಿದು ತುಂಬಿಕೊಂಡಿರುತ್ತಿತ್ತು.   ಎಷ್ಟು ಬಸ್ಸುಗಳಿದ್ದವು ಅಂದುಕೊಂಡಿರಿ. ಪ್ರತೀದಿನ ಕೇವಲ ಮೂರು ಬಸ್ಸು ಇತ್ತು. ಒಂದು ಬೆಳಗ್ಗೆ ಯಲ್ಲಾಪುರ ಬಿಟ್ಟು,  ಮದ್ಯಾಹ್ನ ಕೊಡಸಳ್ಳಿ ತಲುಪಿ, ಸಂಜೆಗೆ ವಾಪಸ್ಸಾಗುತ್ತಿತ್ತು. ಇನ್ನೊಂದು ಮದ್ಯಾಹ್ನ ಒಂದು ಗಂಟೆಗೆ ಹೊರಟು ಸುಮಾರು ನಾಲ್ಕುಗಂಟೆಗೆ ಕೊಡಸಳ್ಳಿ ತಲುಪಿ,  ರಾತ್ರಿಗೆ ವಾಪಸಾಗುತ್ತಿತ್ತು. ಮತ್ತೊಂದು ಸಂಜೆ ಹೊರಡುವ ಬಸ್ಸು. ರಾತ್ರಿಗೆ ಕೊಡಸಳ್ಳಿಯಲ್ಲೇ ಹಾಲ್ಟ್ ಮಾಡಿ ಮರುದಿನ ಬೆಳಿಗ್ಗೆ ಹೊರಟು ಯಲ್ಲಾಪುರ ಬರುವ ಬಸ್ಸು.  ಹಾ..ಹಾ..ಸ್ವಲ್ಪ ತಡೀರಿ. ಈ ಬಸ್ಸುಗಳು ವರ್ಷವಿಡೀ ಇರುವ ಬಸ್ಸುಗಳಲ್ಲ. ವಡ್ಡಿ ಎಂಬ ಊರು ಈಗಿನ ಸಾತೊಡ್ಡಿ ಹತ್ತಿರದ ಇತ್ತು. ಸಾತೊಡ್ಡಿ ಜಲಪಾತದಿಂದ ಕೆಳಗೆ ಬಿದ್ದ ಹೊಳೆನೀರು ಹರಿದು ಬಂದು ಕಾಳಿನದಿ ಸೇರುವ ಜಾಗದಲ್ಲಿ  ಅಂದರೆ ವಡ್ಡಿ ಊರಿಗಿಂತ ಸುಮಾರು ಒಂದು ಕಿಲೋಮೀಟರ್ ಮುಂದೆ, ಪ್ರತೀ ಮಳೆಗಾಲ ಮುಗಿದ ತಕ್ಷಣ , ಯಲ್ಲಾಪುರದಿಂದ ಬರುವ ಬಸ್ಸು ಕೊಡಸಳ್ಳಿಗೆ ತಲುಪಲು , ಒಂದು ಸೇತುವೆ ಕಟ್ಟುತ್ತಿದ್ದರು. ದೊಡ್ಡ ಸಿಮೆಂಟ್ ಪೈಪ್ ಗಳನ್ನು ಜೋಡಿಸಿ ಮಾಡಿದ ಆ ಸೇತುವೆಯ ಆಯಸ್ಸು ಮುಂದಿನ ಮಳೆಗಾಲದ ವರೆಗೆ ಮಾತ್ರ. ಮಳೆಗಾಲ ಪ್ರಾರಂಭದ ಸೂಚನೆ ಕಂಡಾಕ್ಷಣ ಆ ಸಿಮೆಂಟ್ ಪೈಪುಗಳನ್ನು ತೆಗೆದು ಮೇಲೆ ಜೋಡಿಸಿಬಿಡುತ್ತಿದ್ದರು. ಇಲ್ಲವಾದರೆ ಮಳೆಗಾಲದ ಆರ್ಭಟದಲ್ಲಿ ಪೈಪುಗಳು ಕೊಚ್ಚಿ ಕಾಳೀನದಿಗೆ ಹೋಗಿಬಿಡುತ್ತವೆ ಅಂತ.   ಹಾಗಾಗಿ ಮಳೆಗಾಲ ಪ್ರಾರಂಭವಾದ ತಕ್ಷಣ ಬಸ್ಸುಗಳು ವಡ್ಡಿಯಲ್ಲೇ ನಿಂತು ವಾಪಸ್ಸು ಹೋಗಿಬಿಡುತ್ತಿದ್ದವು. ಮುಂದಿನೂರುಗಳ ಜನರಿಗೆ ನಟರಾಜ ಸರ್ವಿಸ್ಸೇ ಗತಿ. ವಡ್ಡಿಯಿಂದ ನನ್ನ ಅಜ್ಜನ ಮನೆಗೆ ಸುಮಾರು ನಾಲ್ಕೈದು ಕಿಲೋಮೀಟರ್ ದೂರ ಇತ್ತು. ಬದಲೀ ರಸ್ತೆಯಲ್ಲಿ, ಸಂಕದ ಮೇಲೆ ನಡೆದು ಹೋಗಬೇಕಿತ್ತು. ಸಾತೊಡ್ಡಿ ಹಳ್ಳದ ಹತ್ತುಹನ್ನೆರಡು ಅಡಿ ಎತ್ತರದಲ್ಲಿ,  ಎರಡು ಮರ ಕತ್ತರಿಸಿ ಮಾಡಿದ,  ಒಂದೂವರೆ ಅಡಿ ಅಗಲದ ಸಂಕದ ಮೇಲೆ ನಡೆಯುವಾಗ,  ಹೃದಯ ಬಾಯಿಗೆ ಬಂದಿರುತ್ತಿತ್ತು. ವಡ್ಡಿಯಿಂದ ಒಂದು ಕಿಲೋಮೀಟರ್ ಮುಂದೆ ಬಂದರೆ ಸಿಗುತ್ತಿತ್ತು…ಒರಿಜಿನಲ್ ರಸ್ತೆ.   ಕಾಳೀನದಿಯ ಪಕ್ಕದಲ್ಲೇ ಹಾದುಹೋದ ರಸ್ತೆ ಅದಾಗಿತ್ತಾದ್ದರಿಂದ, ರಸ್ತೆಯ ಮಣ್ಣೆಂಬುದು ಆಕಡೆ ಮಣ್ಣೂ ಅಲ್ಲ ಈ ಕಡೆ ಮರಳೂ ಅಲ್ಲ ಎಂಬಂತಿರುತ್ತಿತ್ತು. ನುಣುಪಾದ , ಮರಳುಮಿಶ್ರಿತ, ಪುಡಿಮಣ್ಣಿನಲ್ಲಿ ಮಧ್ಯಾಹ್ನದ ಬಿರುಬಿಸಿಲಿನಲ್ಲಿ,  ನಡೆಯುವುದು ಅಂದರೆ ಕಾದ ಮರಳಿನ ಮೇಲೆ ನಡೆಯುವಷ್ಟೇ ಸುಖ….!!  ಸುಡುತ್ತಿರುವ ಕಾಲನ್ನು ಪಟಪಟನೆ ಎತ್ತಿಡುತ್ತಾ,  ವೇಗವಾಗಿ ಸಾಗುತ್ತಿದ್ದೆವು. ಕಾಲು ಸುಡುವುದು ಒಂದು ಕಾರಣವಾದರೆ ಎಷ್ಟೊತ್ತಿಗೆ ಅಜ್ಜನ ಮನೆ ಮುಟ್ಟುತ್ತೇವೆ, ಎಷ್ಟು ಹೊತ್ತಿಗೆ ಹೊಟ್ಟೆಗೆ ಊಟ ಬೀಳುತ್ತದೆ ಎಂಬ ಕಾತುರ ಎರಡನೆಯದು..!!   ತುಂಬಾ ಮಳೆ ಬಂದರೆ ಕೆಂಪು ಬಸ್ಸುಗಳು ಗಣೇಶಗುಡಿಯಲ್ಲೇ ನಿಂತುಬಿಡುತ್ತಿದ್ದವು. ಅಲ್ಲಿಂದ ಅಂದರೆ ಸುಮಾರು ಹನ್ನೆರಡು ಕಿಲೋಮೀಟರ್ ನಡೆಯಬೇಕಿತ್ತು ಬರಬಳ್ಳಿಗೆ. ಕೆಲವೊಮ್ಮೆ ತೆಲಂಗಾರಿನಿಂದ ಅಂದರೆ ಕಳಚೆಗೆ ಹೋಗುವ ಮೊತ್ತೊಂದು ರಸ್ತೆ, ( ಈಗ ಇಡಗುಂದಿಯಿಂದ ಕೈಗಾದ ಮೇಲೆ ಕಾರವಾರ ಹೋಗುವ ರಸ್ತೆ)  ಯಿಂದ ಹೋಗಬೇಕಿತ್ತು. ಸುಮಾರು ಹದಿನೈದು ಕಿಲೋಮೀಟರ್ ದಟ್ಟ ಕಾಡಿನ ರಸ್ತೆ. ಅಷ್ಟು ದೂರ ನಡೆದೇ ಹೋಗಬೇಕಿತ್ತು. ನಡೆದಿದ್ದೇನೆ ಕೂಡಾ.. ಬಾಲ್ಯದಲ್ಲಿ ಆ ದೂರವೆಲ್ಲ ದೂರವೇ ಅಲ್ಲ ಬಿಡಿ. ಅದೂ ಅಜ್ಜನ ಮನೆಗೆ ಹೋಗುವಾಗ……!!  ಹಾಗಾಗಿಯೇ ನನಗೆ ಈಗಲೂ ಕಾಡು ಸುತ್ತುವುದು ಅಂದರೆ, ತಿರುಗಾಟ ಅಂದರೆ ಬಹಳ ಇಷ್ಟ. ಹಳ್ಳ ಕೊಳ್ಳ ನದಿ ಹೊಳೆ ಅಂದರೆ ಪಂಚಪ್ರಾಣ.  

 

( ಮುಂದುವರಿಯುತ್ತದೆ… ಬಹಳ ಸ್ವಾರಸ್ಯಕರ ಅಧ್ಯಾಯ “ಕಬ್ಬಿಣದ ಕುರ್ಲಿ..!!” ಬರಲಿದೆ. ) .

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s