Uncategorized

ಬರಬಳ್ಳಿ. ಭಾಗ-1

Picture 029.jpg

ನನ್ನ ಪ್ರಕಾರ, ಭೂಮಿಯ ಮೇಲಿನ ಸ್ವರ್ಗವಾಗಿತ್ತದು. ಸಾವಿರಾರು ಜಾತಿಯ ಹಲಸಿನ ಮರಗಳು, ಮಾವಿನ ಮರಗಳು, ರಾಂಫಲ, ಸೀತಾಫಲ, ತೆಂಗಿನ ಮರಗಳು, ಬೆಳ್ಳಿಮುಳ್ಳಣ್ಣು, ಪರಿಗೆ ಹಣ್ಣು, ಫೇರಲ ಹಣ್ಣು, ನೇರಳೆಹಣ್ಣು, ಮುರುಗಲಹಣ್ಣು, ಈಚಲಹಣ್ಣು, ಬೇರುಹಲಸಿನ ಮರಗಳು, ಜೇನು, ವಾಸಂತೀಕೆರೆಯ ಶುದ್ಧ ನೀರಿನ ಒರತೆ, ಆಲೇಮನೆ……….ಇಂದು ಇವೆಲ್ಲ ನೆನಪು ಮಾತ್ರ.

ರಜೆ ಬಂದ ತಕ್ಷಣ ನಾನು ಅಜ್ಜನ ಮನೆಗೆ ಹೊರಡಲು ರೆಡಿಯಾಗಿರುತ್ತಿದ್ದೆ. ಮಾವಂದಿರಲ್ಲಿ ಯಾರಾದರೊಬ್ಬರು ಕರೆದೊಯ್ಯುತ್ತಿದ್ದರು ಬರಬಳ್ಳಿಗೆ. ಹಾಗಂತ ಸುಲಭದಲ್ಲಿ ಹೋಗಲಾಗುತ್ತಿರಲಿಲ್ಲ. ಕಾನಲೆಯಿಂದ ಸಿದ್ದಾಪುರ, ಶಿರಸಿ, ಯಲ್ಲಾಪುರ ಹೋಗಲು ಸುಮಾರು ಆರೇಳು ಗಂಟೆಗಳೇ ಹಿಡಿಯುತ್ತಿತ್ತು. ಯಲ್ಲಾಪುರದಿಂದ, ಕಾಲಿಡಲೂ ಸಾಧ್ಯವಿಲ್ಲದಂತೆ ಭರ್ತಿಯಾದ ಕೆಂಪು ಬಸ್ಸಿನಲ್ಲಿ, ಹೇಗೋ ತೂರಿಕೊಂಡು ಹೋಗುವ ಸೊಗಸು, ಅದು ನನಗಷ್ಟೇ ಗೊತ್ತು.

ಯಲ್ಲಾಪುರದಿಂದ ಶಾತೊಡ್ಡಿ ಜಲಪಾತದ ರಸ್ತೆಯಲ್ಲಿ ಹೋದ ಬಸ್ಸು ಅಲ್ಲಿಂದ ಮುಂದೆ ಸಾಗಿ, ವಡ್ಡಿ ದಾಟಿ, ಮುಂದೆ ತಲುಪುತ್ತಿದ್ದುದೇ ಬರಬಳ್ಳಿ.
ದಟ್ಟ ಕಾನನದ ರಸ್ತೆಯಲ್ಲಿ ಬಂದ ಬಸ್ಸು, ಕಾಳೀನದಿಯ ದಂಡೆಯ ಮೇಲೆ ಸಾಗಿ,ಎಡತಿರುಗಿ, ಬರಬಳ್ಳಿ ಪ್ರವೇಶಿಸುತ್ತಲೇ ರೋಮಾಂಚನ…
.
ಮಾವನ ಮನೆಯಲ್ಲಿ ಅದಾಗಲೇ ಬರವು ನೋಡುತ್ತಿದ್ದ ಭಾವಂದಿರೊಡನೆ ಸೇರಿ, ನಮ್ಮ ತಿರುಗಾಟ, ಮರುದಿನದಿಂದಲೇ ಶುರುವಾಗುತ್ತಿತ್ತು.

ಉದ್ದಬ್ಬಿ, ಕೋಟೇಕಲ್ಲು, ವಾಸಂತೀಕೆರೆ, ಕಾಡು, ದಟ್ಟಕಾಡು, ಕಾಳೀನದಿ ದಂಡೆ…. ಇತ್ಯಾದಿ ತಿರುಗಾಟ ಮಾಮೂಲು ಬಿಡಿ..ಆದರೆ ವಡ್ಡಿಗೆ ಹೊಳೆ ಮೀಸಲು ಅಂದರೆ ಹೊಳೆಯಲ್ಲಿ ಈಜಲು ಹೋಗುವ ಅನುಭವ ಮಾತ್ರ ಅನನ್ಯ.

ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮನಸೋಇಚ್ಚೆ ನೀರಲ್ಲಿ ಬಿದ್ದು, ಹೊಟ್ಟೆ ಚುರುಗುಟ್ಟಿದೊಡನೆ , ಅಲ್ಲಿಂದ ಎದ್ದು, ಸುಮಾರು ಮೂರು ಕಿಲೋಮೀಟರ್ ದೂರದ ಅಜ್ಜನ ಮನೆಗೆ, ಸುಡುಸುಡು ಮರಳಿನಂತ ಮಣ್ಣಿನಲ್ಲಿ ನಡೆಯುತ್ತ, ಬರಿಗಾಲಿನಲ್ಲಿ ಬರುತ್ತಿದ್ದೆವು… ಚಪ್ಪಲಿ ಯಾರಲ್ಲಿತ್ತು ಆಗ……..!!

ಹಲಸಿನಕಾಯಿ ಹುಳಿ ಮಾಡಿರುತ್ತಿದ್ದ ಅಮ್ಮಕ್ಕಜ್ಜಿ, ನಮ್ಮನ್ನು ಕಂಡೊಡನೇ, ಪ್ವಾರಂಗರಾ ಬನ್ನಿ ಉಂಬಲೆ, ಅಂತ ಊಟಹಾಕುತ್ತಿದ್ದಾಗ ….. ಬೇರೆ ಸ್ವರ್ಗ ಬೇಕಾ. ಊಟದ ವಿಷಯದಲ್ಲಿ ಅದೃಷ್ಟವಂತ ನಾನು. ಸದ್ಗುರುಗಳ ದಯೆಯಿಂದ ಯಾವತ್ತೂ ಊಟಕ್ಕೆ ಕೊರತೆಯಾಗಿಲ್ಲ ಜೀವನದಲ್ಲಿ. ಇರ್ಲಿ. ಈ ಹಲಸಿನಕಾಯಿ ಹುಳಿ ಅಥವಾ ಸಾಂಬಾರ್ ವಿಷಯಕ್ಕೆ ಬರ್ತೀನಿ.

ಹಲಸಿನಕಾಯಿಸೊಳೆಯನ್ನು ಹೆಚ್ಚಿ, ಅದು ಕರಗುವವರೆಗೂ ಬೇಯಿಸಿ ಮಾಡುವ ಈ ಹುಳಿ ಅದ್ಬುತವಾಗಿರುತ್ತಿತ್ತು. ಎಷ್ಟೋ ದಿನ ಅನ್ನವನ್ನೇ ಹಾಕಿಸಿಕೊಳ್ಳದೇ ಬರೀ ಇದನ್ನೇ ತಿಂದಿದ್ದೂ ಇದೆ. ತೊಗರಿಬೇಳೆಯ ತೊವ್ವೆ ಬಹುಶಃ ಬಹಳ ಜನ ತಿಂದಿರಬಹುದು. ಇದು ಅದಕ್ಕಿಂತ ಮಂದವಾಗಿರುವ ಅಥವಾ ದಪ್ಪನಾದ ಸಾಂಬಾರ್. ಅದರಲ್ಲಿ ಬೆಂದು ಮೆತ್ತಗಾಗಿರುವ ಹಲಸಿನ ಸೊಳೆಗಳನ್ನು ತಿನ್ನುವುದೂ ಒಂದು ಆನಂದ.

ಜೊತೆಗೆ ಮೊತ್ತೊಂದು ಅಡುಗೆ ಮಾವಿನಕಾಯಿ ಕೆಂಪು ಚಟ್ನಿ. ಮಾವಿನಕಾಯಿಯ ಹೋಳುಗಳಿಗೆ ತೆಂಗಿನಕಾಯಿತುರಿ ಸೇರಿಸಿ ಬೀಸಿ, ಅದಕ್ಕೆ ಇಂಗಿನ ವಗ್ಗರಣೆ ಹಾಕಿದ ಆ ಚಟ್ನಿಯ ರುಚಿಯೇ ರುಚಿ. ನನ್ನಜ್ಜಿ ಅಮ್ಮಕ್ಕಜ್ಜಿಯ ಕೈರುಚಿ ಹಾಗಿತ್ತು.

ಕಾಡು ತಿರುಗುವುದು ನಮ್ಮ ನೆಚ್ಚಿನ ಹವ್ಯಾಸ. ಊರಿನ ಒಂದು ಭಾಗದಲ್ಲಿ ಕಾಳೀನದಿ ಹರಿಯುತ್ತಿತ್ತು. ಉಳಿದೆಲ್ಲ ಭಾಗವೂ ಕಾಡೇ. ದಟ್ಟ ಕಾಡಿನ ಕಾಲ್ದಾರಿಗಳಲ್ಲಿ ಸಾಗುವಾಗ ಹುಲಿ,ಸಿಂಹ,ಕರಡಿ,ಕಾಡುಹಂದಿಗಳೆಲ್ಲ ಬಂದುಹೋಗುತ್ತಿದ್ದವು…ಮನದಲ್ಲಿ. ಎಷ್ಟೋ ಸಲ ನಾವು ಉದ್ದಬ್ಬಿಗೆ ಹೋಗಿ, ಅಲ್ಲಿಂದ ಕೋಟೇಕಲ್ಲಿಗೆ ಹೋಗಿ ಬಂದಿದ್ದೇವೆ. ಉದ್ದಬ್ಬಿಗೆ ಹೋಗುವ ದಾರಿಯಲ್ಲೇ ತಿರುಗಿ ದೊಡ್ಡ ಕಲ್ಲಿನ ಗುಹೆ ಇರುವ ಜಾಗಕ್ಕೂ ಹೋಗಿದ್ದೇವೆ. ಅಲ್ಲಿ ಗುಹೆಯಲ್ಲಿರುವ ಬಾವಲಿಗಳನ್ನು ನೋಡಿ ಭಯಮಿಶ್ರಿತ ಸಂತೋಷದೊಂದಿಗೆ ರೋಮಾಂಚನವನ್ನೂ ಅನುಭವಿಸಿದ್ದೇವೆ. ಇಂದು ಬಹುಶಃ ಅದೆಲ್ಲವೂ ಹಳವಂಡಗಳು……

ಬ್ರಹ್ಮಾಂಡ ಗಾತ್ರದ ಮರಗಳು, ಆಕಾಶದೆತ್ತರದಲ್ಲಿ ಇದ್ದ ಜೇನುಗೂಡುಗಳು, ಬಿಳಿಯ ಬೂರುಗದ ಮರ, ಕಾಡಿನ ನಡುವೆ ಇದ್ದ , ಸಿಹಿಯಾದ ಹಣ್ಣು ಕೊಡುತ್ತಿದ್ದ ಮಾವಿನ ಮರಗಳು , ರುಚಿಯಲ್ಲಿ ಎಲ್ಲವನ್ನೂ ಮೀರಿಸುವ ಬೇರುಹಲಸು, ಎಲ್ಲವೂ ಈಗ ನೆನಪು ಮಾತ್ರ.

ಬೆಳಿಗ್ಗೆ ಎದ್ದಾಕ್ಷಣ ನಾವು ಮಾಡುತ್ತಿದ್ದ ಮೊದಲ ಕೆಲಸ ಮಾವಿನ ಮರಗಳ ಹತ್ತಿರ ಓಡುವುದು. ಖಳಮಾಯ ಎಂಬ, ಅರ್ಧ ಕೆಂಪು ಅರ್ಧ ಹಸಿರು ಬಣ್ಣದ ಹಣ್ಣಾಗುವ ಮರವೊಂದಿತ್ತು. ಅದರ ಬುಡದಲ್ಲಿ ಅರ್ಧ ಬುಟ್ಟಿ ಹಣ್ಣು ಗ್ಯಾರಂಟಿ. ಹಲವು ಈಷಾಡಿ ಹಣ್ಣಿನ ಮರಗಳಿದ್ದವು. ಮನೆಯ ಪಕ್ಕದಲ್ಲೆ ಮೃದುಮಧುರ ಹಣ್ಣಿನ ಗೋಮಾಯವಿತ್ತು. ಹಣ್ಣುಗಳನ್ನು ಆರಿಸಿಕೊಳ್ಳಲು ನಮ್ಮನಮ್ಮಲ್ಲೇ ಹೊಡೆದಾಟವೂ ಆಗುತ್ತಿತ್ತು. ಎಲ್ಲಕ್ಕಿಂತ ಮಿಗಿಲಾದ ಒಂದು ಮರವಿತ್ತು. ಈಷಾಡೀ ಹಣ್ಣೇ, ಆದರೆ ಮರ ರೆಂಬೆಕೊಂಬೆಗಳಿಲ್ಲದೇ ಸುಮಾರು ಐವತ್ತು ಅಡಿ ಎತ್ತರ ಹೋಗಿತ್ತು. ಅದರ ಹಣ್ಣು ಸಣ್ಣದೊಂದು ಸಿಪ್ಪೆಸಹಿತದ ತೆಂಗಿನ ಕಾಯಿಯ ಗಾತ್ರ. ಒಳಗಿನ ಒರಟೆ ಮಾತ್ರ ಬಲು ಚಿಕ್ಕದು. ಎಷ್ಟು ಚಿಕ್ಕದೆಂದರೆ, ದೊಡ್ಡ ಸಿಪ್ಪೆಸಹಿತದ ಹಣ್ಣಡಿಕೆ ಗಾತ್ರ. ಹಣ್ಣು ಸಂಪೂರ್ಣ ತಿರುಳಿನಿಂದ ಆವೃತವಾಗಿರುತ್ತಿತ್ತು. ಅತ್ಯಂತ ಮೃದು ಮಧುರ ಹಣ್ಣು. ಅಂತ ಮಾವಿನ ಹಣ್ಣನ್ನು ನಾನು ಬೇರೆಲ್ಲೂ ತಿಂದಿಲ್ಲ.

ಅದಲ್ಲದೇ ವಾಸಂತಿ ಕೆರೆಯ ಹತ್ತಿರವಿದ್ದ ಮಾಮರ, ಇನ್ನೊಂದಿತ್ತು, ನರಸಿಂಹ ಮಾವನ ಮನೆಯ ತೋಟದಲ್ಲಿದ್ದ ಸಕ್ಕರೆ ಮಾವು. ಹೆಸರಿಗೆ ತಕ್ಕಂತಿತ್ತು ಆ ಹಣ್ಣು. ಗಾತ್ರದಲ್ಲಿ ಸಣ್ಣದು ಆದರೆ ರುಚಿ……ಅದ್ಭುತ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತಾರಲ್ಲ ಹಾಗೆ.

ಹಾಗೆಯೇ, ಹಲಸಿನ ಮರಗಳು ಸಾವಿರಾರು ಸಂಖ್ಯೆಯಲ್ಲಿದ್ದವು. ಬಕ್ಕೆ ಮತ್ತು ಬಿಳುವ ಎಂಬೆರಡು ಜಾತಿಯ ಅಸಂಖ್ಯಾತ ಮರಗಳು. ಮರ ಹತ್ತಿದರೆ ನಾವು ಕೋತಿಗಳೇ. ಒಂದಿಡೀ ಹಣ್ಣನ್ನೇ ತಿಂದು ಕೆಳಗಿಳಿಯುತ್ತಿದ್ದೆವು. ಸಿಪ್ಪೆ ಮತ್ತು ಸಾರೆಯನ್ನು ಮರದ ಮೇಲೆಯೇ ಇಟ್ಟು…..!!

ಪರಿಗೀ ಹಣ್ಣು, ಬಿಳಿಮುಳ್ಳಣ್ಣು ಅಥವಾ ಬೆಳ್ಳೀಮುಳ್ಳಣ್ಣು, ನುರುಕಲ ಹಣ್ಣು, ಸಂಪಿಗೆಹಣ್ಣು, ಪೇರಲಹಣ್ಣು, ರಾಂಫಲ, ಸೀತಾಫಲ, ನೇರಳೇ, ಮುರುಗಲು, ಈಚಲುಹಣ್ಣು, ಮತ್ತು ಅಸಂಖ್ಯಾತ ಹೆಸರೇ ಗೊತ್ತಿಲ್ಲದ ಹಣ್ಣುಗಳು…! ರುಚಿ ಮಾತ್ರ ಗೊತ್ತು ನನಗೆ.

ಕೆಲವೊಮ್ಮೆ ರಾತ್ರಿ ಶಿಕಾರಿಗೆ ಹೊರಡುತ್ತಿದ್ದೆವು. ಶಿಕಾರಿ ಎಂದರೆ ಕಾಡುಪ್ರಾಣಿಗಳ ಬೇಟೆ ಅಂತ ತಿಳಿಯಬೇಡಿ. ಎಳನೀರ ಶಿಕಾರಿ..!! ಹತ್ತಿರದಲ್ಲಿದ್ದ ಅಂಬಡೇ ಮನೆ ತೋಟದ ತೆಂಗಿನ ಮರಗಳೇ ನಮ್ಮ ಗುರಿ. ನಾನು ಮರ ಹತ್ತುತ್ತಿರಲಿಲ್ಲ ಯಾಕೆಂದರೆ ಮೊದಲಿಂದಲೂ ನಾನು ಸ್ವಲ್ಪ ಗಜಗಾತ್ರದವ. ದಷ್ಟಪುಷ್ಟವಾಗಿದ್ದೆ. ತಾಕತ್ತು ಉಪಯೋಗಿಸುವ ಕೆಲಸಕ್ಕೆ ಮೊದಲು ಮುನ್ನುಗ್ಗುತ್ತಿದ್ದೆ. ಆದರೆ ದೊಡ್ಡ ದೇಹ ಹೊತ್ತುಕೊಂಡು ತೆಂಗಿನ ಮರ ಹತ್ತುವುದು….! ಊಹೂಂ, ಸಾದ್ಯವಿರಲಿಲ್ಲ. ಆದರೆ ನಮ್ಮ ಗುಂಪಿನಲ್ಲಿ ತೆಂಗಿನ ಮರ ಹತ್ತಲು ಅಸಾಧ್ಯ ಕಲಾಕಾರರಿದ್ದರು. ಮರಕ್ಕೇ ಗೊತ್ತಾಗದಂತೆ ಮರ ಹತ್ತುವವರಿದ್ದರು. ನಾವು ಒಂದೆರಡು ಜನ ಕೆಳಗೆ ಕಾವಲು ಕಾಯುವವರು. ಒಬ್ಬಿಬ್ಬರು ಮರ ಹತ್ತಿ ಎಳನೀರು ಇಳಿಸುವವರು. ಯಾರಾದರೂ ಬಂದರೆ ನಾವು ಸುಳಿವು ಕೊಟ್ಟು ಜಾರಿಕೊಳ್ಳುತ್ತಿದ್ದೆವು. ಮರ ಹತ್ತಿದವರು ಇನ್ನೂ ಮೇಲೆ ಹತ್ತಿ ತೆಂಗಿನ ಹೆಡೆಗಳ ಮೇಲೆ ಅಡಗಿ ಕೂರುತ್ತಿದ್ದರು. ಕೆಲವೊಮ್ಮೇ ಅಲ್ಲೇ ಕುಳಿತು ಐದಾರು ಎಳನೀರು ಕುಡಿದು, ಚಿಪ್ಪನ್ನು ಮರದಮೇಲೆಯೇ ಇಟ್ಟು ಬರುತ್ತಿದ್ದರು. ನಂತರ ನಾವು ಒಬ್ಬೊಬ್ಬರು ಹತ್ತು ಹನ್ನೆರಡು ಎಳನೀರು ಕುಡಿಯುತ್ತಿದ್ದೆವು.

ಕೆಲವು ವರ್ಷ ನರಸಿಂಹ ಮಾವನ ಮನೆಯ ( ಅವನಿಗೆ ನಾನು ಕರೆಯುವುದು ನರಸಿಂವ್ವಣ್ಣಮಾವ ಅಂತ .. ) ಗದ್ದೆಯಲ್ಲಿ ಶೇಂಗಾ ಬೆಳೆಯುತ್ತಿದ್ದರು. ಒಣಗಿದ ಗಿಡಗಳನ್ನು ಕಿತ್ತುಕೊಂಡು ಬಂದ ಮೇಲೆ ಅದರಿಂದ ಶೇಂಗಾ ಬಿಡಿಸಿ ಅದನ್ನು ಒಡೆದು ಶೇಂಗಾ ಕಾಳುಗಳನ್ನು ಮಾಡಬೇಕಲ್ಲ, ಅದಕ್ಕೆ ಹೋಗುತ್ತಿದ್ದೆ. ಅಲ್ಲಿ ತಿನ್ನುವಷ್ಟು ಶೇಂಗಾಬೀಜ ಸಿಗುತ್ತಿತ್ತು. ಬಾಲ್ಯ ಅಂದರೇ ಹಾಗೆ ನಮಗೆ. ಎಲ್ಲಿ ಏನು ತಿನ್ನಲು ಸಿಗುತ್ತದೆ ಎಂದು ಹುಡುಕುವುದು. ಎಷ್ಟು ತಿಂದರೂ ಭಗವಂತನ ದಯದಿಂದ ಆರೋಗ್ಯಕ್ಕೇನೂ ಆಗುತ್ತಿರಲಿಲ್ಲ.

ಇಂದಿನ ಚಿಕ್ಕಮಕ್ಕಳನ್ನು ನೋಡಿದಾಗ, ನನಗೆ ಅಯ್ಯೋ ಅನ್ನಿಸುತ್ತದೆ. ಅದರಲ್ಲೂ ಪಟ್ಟಣದಲ್ಲಿ ಇರುವ, ಅಲ್ಲಿ ಹುಟ್ಟಿ ಬೆಳೆದ ಮಕ್ಕಳು , ಪಾಪ ಅವು, ಬಾಲ್ಯದ ಸೊಗಸುಗಳನ್ನು ಕಾಣದ, ಬಾಲ್ಯದ ಆಟೋಟಗಳನ್ನು ಕಾಣದ ಪೀಳಿಗೆ. ಬೆಳಿಗ್ಗೆ ಎದ್ದು ಬಸ್ಸು, ಆಟೋ ಹತ್ತಿ ಶಾಲೆಗೆ ಹೊರಟು ಕಾಂಕ್ರೀಟ್ ಕಾಡಿನ ನಡುವಿನ ಶಾಲೆಯಲ್ಲಿ ದಿನಕಳೆದು, ವಾಪಸ್ಸು ಮನೆಗೆ ಬಂದು ಟೀವಿ ನೋಡುತ್ತ ಕೂರುತ್ತವೆ. ಮಮ್ಮೀ ಸೀ ದೇರ್ ಫಾರೆಸ್ಟ್ ಅಂತ ಟೀವಿಯಲ್ಲಿ ಕಂಡ ಕಾಡನ್ನು ನೋಡಿ ಕುಣಿದಾಡುತ್ತವೆ. ಬಾಲ್ಯದಲ್ಲಿ ನಾನು ಕಾಡುಹಂದಿ ಮತ್ತು ಕರಿಚಿರತೆಯನ್ನು ಕಾಡಲ್ಲೇ ನೋಡಿದ್ದೆ.

ಹಾಂ..ಮರೆತೆ. ಬರಬಳ್ಳಿಯ ಮಹಾಗಣಪತಿ ದೇವಸ್ಥಾನದಲ್ಲಿ ,ಯುಗಾದಿಯ ನಂತರ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಈಗ ಅದು ಹೆಗ್ಗಾರಿನಲ್ಲಿ ಪರಂಪರೆಯಂತೆ ನಡೆಯುತ್ತಿದೆ. ಆದರೆ ಆಗಿನ ಕಾಲದ ಸೊಗಸು ಮತ್ತೆ ಬರಲಾರದು. ರಾತ್ರಿ ಭಜನೆ ಮುಗಿಸಿ ನಾವೆಲ್ಲ ಮನೆಗಳಿಗೆ ವಾಪಸಾಗುವಾಗ ಸೂಡಿ ಹತ್ತಿಸಿಕೊಂಡು ಬರುತ್ತಿದ್ದ ಆ ಮಧುರ ನೆನಪುಗಳು ಬೇರೆಲ್ಲೂ ಸಿಗಲಾರದು. ಸೂಡಿ ಅಂದರೆ ಏನು ಅಂತ ಯೋಚಿಸುತ್ತಿದ್ದೀರಾ..?? ತೆಂಗಿನ ಗರಿ ಅಥವಾ ಅಡಕೇಸೋಗೆಯನ್ನು ಕಸಬರಿಗೆಯಂತೆ ಕಟ್ಟಿ ಅದರ ಒಂದು ತುದಿಗೆ ಬೆಂಕಿ ಹತ್ತಿಸಿಕೊಂಡು ಅದರ ಬೆಳಕಲ್ಲಿ ಸುಮಾರು ಒಂದು ಕಿಲೋಮೀಟರ್ ನಡೆದು ಬರುತ್ತಿದ್ದೆವು. ಬೇರೆ ಟಾರ್ಚ್ ಎಲ್ಲಿತ್ತು ಆ ಕಾಲದಲ್ಲಿ. ಆಗ ಸಿಕ್ಕಿದ್ದ ಒಂದೇ ಒಂದು ಲಕ್ಷುರಿ ವಸ್ತು ಅಂದರೆ ಮಾವನ ಮನೆಯಲ್ಲಿದ್ದ ಫಿಲಿಫ್ಸ್ ರೇಡಿಯೋ.

ನಾವು ಬೇಸಿಗೆ ರಜದಲ್ಲೇ ಹೆಚ್ಚಾಗಿ ಅಲ್ಲಿರುತ್ತಿದ್ದುದರಿಂದ, ಆ ಸಮಯದಲ್ಲಿ ಬಹಳ ಸೆಕೆಯೂ ಇರುತ್ತಿದ್ದುದರಿಂದ, ದಿನಾ ಎರಡು ಮೂರು ಸ್ನಾನ ಗ್ಯಾರಂಟಿ ಇತ್ತು. ರಾತ್ರಿಯ ಹೊತ್ತು, ಧಾರಾಕಾರವಾಗಿ ಬೀಳುತ್ತಿದ್ದ ಅಬ್ಬಿಯ ನೀರಲ್ಲಿ, ರೇಡಿಯೋ ಕೇಳುತ್ತ, ಗಂಟೆಗಟ್ಟಲೇ ಸ್ನಾನ ಮಾಡುತ್ತಿದ್ದ ನೆನಪು ಈ ಜನ್ಮಕ್ಕೆ ಮರೆಯಾಗುವುದಿಲ್ಲ….

( ಮುಂದುವರೆಯುತ್ತದೆ………..
ಯಾಕೇಂದ್ರೆ ಹೇಳೋದು ಬಹಳಷ್ಟಿದೆ…..)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s