Uncategorized

ಬರಬಳ್ಳಿ – ಭಾಗ 5

image

ಬರಬಳ್ಳಿಯಿಂದ ಸುಮಾರು ಆರೇಳು ಕಿಲೋಮೀಟರ್ ದೂರದಲ್ಲಿ ಇತ್ತು ಈ ಸಾತೊಡ್ಡಿ ಜಲಪಾತ. ಸಾತೊಡ್ಡಿ ಅಂತ ಹೆಸರು ಬರಲು ಕಾರಣ , ಆ ಊರಿನ ಹೆಸರು ಸಾತೊಡ್ಡಿ. ಶಾತೊಡ್ಡಿ ಅಂತಲೂ ಎನ್ನುತ್ತಿದ್ದರು. ವಡ್ಡಿ ಎಂಬ ಊರಿನಿಂದ ಮುಂದೆ ಇತ್ತು ಅದು.

ಈಗಲೂ ಸಾತೊಡ್ಡಿ ಫಾಲ್ಸ್ ಇದೆ. ಯಲ್ಲಾಪುರದಿಂದ ಗಣೇಶಗುಡಿ ಮಾರ್ಗವಾಗಿ ಜಲಪಾತದ ಒಂದು ಕಿಲೋಮೀಟರ್ ಹತ್ತಿರದ ತನಕ ಹೋಗಲು ವ್ಯವಸ್ಥೆ ಇದೆ.
ಆದರೆ ಆಗ ನಾವು ಬರಬಳ್ಳಿಯಿಂದ ನಡೆದು ಹೋಗುತ್ತಿದ್ದೆವು. ವಡ್ಡಿಯ ಮರದಸಂಕ ಅಥವಾ ಒಂದಡಿ ಅಗಲದ ಮರದ ಸೇತುವೆಯನ್ನು ದಾಟಿ ಹೋಗುವ ಮಧುರ ಕ್ಷಣಗಳೇ ರೋಚಕವಾಗಿರುತ್ತಿತ್ತು. ಬೆಳಿಗ್ಗೆ ತಿಂಡಿ ತಿಂದು ಹೊರಟರೆ , ಜಲಪಾತದ ಬುಡದಲ್ಲಿ ನಿಲ್ಲುವ ವರೆಗೂ ಸಮಾಧಾನ ಇರುತ್ತಿರಲಿಲ್ಲ.

ಸಾತೊಡ್ಡಿ ಜಲಪಾತಕ್ಕೆ ಮೊದಲ ಬಾರಿ ನಾನು ಹೋಗಿದ್ದು (ನನಗೆ ನೆನಪಿರುವಂತೆ ) ರಾಮಚಂದ್ರ ಮಾವನ ಜೊತೆ. ಹಾಂ.. ಮಾವನ ಭಾವೀ ಪತ್ನಿ, ಸುಮನತ್ತೆ , ಜೊತೆಗೆ ಅವಳ ಇನ್ನಿಬ್ಬರು ಸ್ನೇಹಿತೆಯರಿದ್ದರು . ಶಿವಪೂಜೆಯ ನಡುವೆ ನಾನೊಬ್ಬ ಏಳೆಂಟು ವರ್ಷದ ಚಿಕ್ಕ ಹುಡುಗ.. !

ಆಗ ಜಲಪಾತ ನೋಡಿಬಂದ ನೆನಪುಗಳು ಸುಮಾರಾಗಿ ಮಾಸಿ ಹೋಗಿವೆ. ಆದರೆ ಮುಳುಗಡೆಯ ನಂತರ ಒಂದು ಬಾರಿ ಬರಬಳ್ಳಿಗೆ ಹೋಗಿದ್ದೆ. ನನ್ನ ಮೊತ್ತೊಬ್ಬ ಮಾವ ಶಂಕಣ್ಣಮಾವ ಆ ಸಮಯದಲ್ಲಿ ಇನ್ನೂ ಬರಬಳ್ಳಿಯ ಬದುಕಿಗೆ ತಿಲಾಂಜಲಿ ಇತ್ತಿರಲಿಲ್ಲ.  ಅಲ್ಲೇ ಇದ್ದು, ಅವನೇ ಮರಕಡಿದು, ಕೆತ್ತಿ , ಒಂದು ದೋಣಿ ಮಾಡಿದ್ದ. ನಾಲ್ಕೈದು ಜನ ಹೋಗಬಹುದಾದಷ್ಟು ದೊಡ್ಡ ದೋಣಿ ಆಗಿತ್ತದು.

ಆ ದೋಣಿಯಲ್ಲಿ ಕುಳಿತು, ನಾನು ಶಂಕಣ್ಣ ಮಾವ ಮತ್ತು ಶಶಿಧರ ಭಾವ ಒಮ್ಮೆ ಜಲಪಾತಕ್ಕೆ ಹೋಗಿದ್ದೆವು.ಆಣೆಕಟ್ಟಿನ ಹಿನ್ನೀರಿನಲ್ಲಿ , ವಿಶಾಲ ಜಲರಾಶಿಯ ನಡುವೆ, ಸುತ್ತಮುತ್ತಲೂ ಯಾರೂ ಇಲ್ಲದ ಜಾಗದಲ್ಲಿ, ದೋಣೀವಿಹಾರ , ಒಂದು ಅದ್ಭುತ ಅನುಭವ ಬಿಡಿ.

ಮೇಲಿನ ಚಿತ್ರದಲ್ಲಿ ಕಾಣುವ , ಸುಂದರ ಪ್ರಾಕೃತಿಕ , ಸಾತೊಡ್ಡಿ ಜಲಪಾತ ದರ್ಶನ ಅನುಭವ, ಅನನ್ಯ. ಜಲಪಾತದ ಎಡಬಾಗ, ಅಂದರೆ , ನಾವು ಎದುರು ನಿಂತಾಗ ನಮ್ಮ ಬಲಬಾಗದಲ್ಲಿ ಒಂದು ಇಳಿಜಾರು ಮೆಟ್ಟಿಲಿನಂತ ಅಡ್ಡರಚನೆ ಕಾಣುತ್ತೆ ನೋಡಿ, ಅದು ಬಹಳ ಅಪಾಯಕಾರಿ ಜಾಗ. ಎಂತಹವರಲ್ಲೂ  ಒಮ್ಮೆ ಮೇಲೆ ಹತ್ತೋಣ ಎಂಬ ಆಸೆ ಹುಟ್ಟಿಸುವ ಜಾಗ. ಮೇಲೆ ಹತ್ತಿದರೆ ಜಾರುವ ಕಲ್ಲುಗಳು. ಹಿಡಿದುಕೊಳ್ಳಲು ಏನೂ ಸಿಗದ, ತಿರುಗಿ ನೋಡಿದರೆ ಎದೆ ದಸಕ್ಕೆನಿಸುವ ಜಾಗ. ಅಲ್ಲಿ ಹತ್ತುವ ವಿಫಲ ಪ್ರಯತ್ನ ಮಾಡಿದ್ದಿದೆ.

ವಾಪಸ್ ಬರುವಾಗ ಮಾತ್ರ , ದೋಣಿಯ ಹುಟ್ಟು ಹಾಕಿ ಹಾಕಿ ಕೈಗಳು ಬಿದ್ದುಹೋಗುವ ಅನುಭವ. ಕೈಗಳು ನೋವಾಗಲು ಶುರುವಾದಾಗ , ಹುಟ್ಟು ಹಾಕುವುದನ್ನು ಕೆಲಕಾಲ ನಿಲ್ಲಿಸಿ , ಸ್ವಚ್ಛಂದ ತೇಲುವ ಅವಕಾಶ.  ತೇಲುತ್ತಿದ್ದರೆ ದಡ ಕಾಣದು ಅಂತ ಮತ್ತೆ ಹುಟ್ಟು ಹಾಕೋದು. ಬಿಡಿ. ಆ ಅನುಭವಗಳ ಮುಂದೆ ದಾಲ್ ಸರೋವರವೂ ಏನೂ ಅಲ್ಲ.

ಇಂತಹ ಅನನ್ಯ ಅನುಭವಗಳ ನಡುವೆ, ಹೀಗಿದ್ದ ಊರು ಮುಳುಗಡೆ ಆಗಿಹೋಯಿತಲ್ಲಾ ಎಂಬ ನಮ್ಮ ನೋವು ಯಾರಿಗರ್ಥವಾಗುತ್ತೆ.

ಇತ್ತೀಚೆಗೆ ಇನ್ನೊಂದು ಸುದ್ದಿ ತಿಳಯಿತು. ಅಘನಾಶಿನೀ ನದಿಯನ್ನು ತಿರುಗಿಸಿ, ಹುಬ್ಬಳ್ಳಿಗೆ ನೀರು ಒದಗಿಸುವ ಪ್ರಯತ್ನ ಮಾಡುತ್ತಾರೆ ಅಂತ. ನೇತ್ರಾವತಿ ಆಯ್ತು ಈಗ ಅಘನಾಶಿನಿಗೆ ಕೈ ಹಾಕಿ ತಾವೂ ನಾಶವಾಗುವುದಲ್ಲದೇ ಪಶ್ಚಿಮಘಟ್ಟಗಳನ್ನೂ ಸರ್ವನಾಶ ಮಾಡುತ್ತಾರಿವರು ಎಂದು ಬೇಸರವಾಯಿತು.

ಒಂದು ವೇಳೆ ಅಂತಹ ಪ್ರಯತ್ನ ನಡೆದರೆ , ಪ್ರಜ್ಞಾವಂತ ಉತ್ತರ ಕನ್ನಡ ಜನತೆ ಪ್ರತಿಭಟನೆ ಮಾಡಲೇಬೇಕು. ತಡೆಯಲೇಬೇಕು. ಏನಂತೀರಿ…??

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s